ಟಾಲ್‍ಚಿರ್ ಗುಂಡು ಶಿಲಾಸ್ತರಗಳು  -
ಗೊಂಡ್ವಾನ ಸಮುದಾಯದ ಶಿಲಾಶ್ರೇಣಿಗಳ ಪ್ರಾರಂಭ ಪ್ರದೇಶ. ಹಸಿರು ಅಥವಾ ಕೆಂಪು ಛಾಯೆಯ ಜೇಡುಶಿಲೆ ಮತ್ತು ಬೂದು ಅಥವಾ ಕೆಂಪು ಕಂದುಮಿಶ್ರಿತ ಛಾಯೆಯ ಮೈದುವಾದ ಮರಳು ಶಿಲೆಗಳಿಂದ ಕೂಡಿವೆ. ನಡುವೆ ಅಲ್ಲಲ್ಲೇ ವಿವಿಧಗಾತ್ರದ ಗುಂಡುಕಲ್ಲುಗಳು ಮತ್ತು ಪೆಂಟೆಕಲ್ಲುಗಳು ಹರಡಿರುವುದನ್ನು ಕಾಣಬಹುದು. ಇವುಗಳ ಮೈ ನುಣುಪಾಗಿದ್ದು ಆಕಾರದಲ್ಲಿ ಸಾಮಾನ್ಯವಾಗಿ ಗುಂಡಾಗಿಯೋ ಅಂಡಾಕಾರವಾಗಿಯೋ ಇರುತ್ತವೆ. ಗಾತ್ರದಲ್ಲಿ ಏರುಪೇರುಗಳನ್ನು ಕಾಣಬಹುದು. ಉದಾಹರಣೆಗೆ ಅತಿಸಣ್ಣ ಪೆಂಟೆಯ ವ್ಯಾಸ ಒಂದು ಅಂಗುಲಕ್ಕಿಂತ ಕಡಿಮೆ. ಅತಿದೊಡ್ಡ ಗುಂಡುಕಲ್ಲಿನ ವ್ಯಾಸ 15`ಗಳಿಗೂ ಹೆಚ್ಚು. ಇದರ ತೂಕ ಸುಮಾರು 20 ಟನ್ನುಗಳಷ್ಟಿರುತ್ತದೆ. ಇದಕ್ಕೂ ದೊಡ್ಡ ಗಾತ್ರದ ಅಂದರೆ 30` ರಿಂದ 40`ಗಳಷ್ಟು ವ್ಯಾಸವುಳ್ಳ ದೈತ್ಯಾಕಾರದ ಗುಂಡುಕಲ್ಲುಗಳನ್ನು ಬಿಹಾರಿನ ಸರ್ಗುಜಾ ಬಳಿ ಇರುವ ತಾತಾಪಾನಿ ಕಲ್ಲಿದ್ದಲ ಗಣಿ ಪ್ರದೇಶದಲ್ಲಿ ಗುರುತಿಸಲಾಗಿದೆ. ಇವುಗಳ ಪೈಕಿ ಕೆಲವು ಶ್ರೇಣಿಯ ತಳ ಭಾಗದಲ್ಲೂ ಮತ್ತೆ ಕೆಲವು ತಳಭಾಗದಿಂದ ನೂರಾರು ಅಡಿಗಳ ಮೇಲ್ಭಾಗದಲ್ಲೂ ಇವೆ. ಹಲಕೆಲವು ನುಣುಪಾಗಿ ಗುಂಡಾಗಿರದೆ ಡೊಂಕು ಡೊಂಕಾಗಿಯೇ ಇರುವುವು. ಒಟ್ಟಿನಲ್ಲಿ ಗಾತ್ರ ಮತ್ತು ಆಕಾರದಲ್ಲಿ ವ್ಯತ್ಯಾಸಗಳಿದ್ದರೂ ಸಾಮಾನ್ಯವಾಗಿ 6`ಗಳಿಂದ 3`ಗಳ ವರೆಗೆ ವ್ಯಾಸವುಳ್ಳ ಪೆಂಟೆಗಳನ್ನು ನೋಡಬಹುದು. 

ಈ ಶಿಲಾಸ್ತರಗಳ ಪೆಂಟೆಗಳು ಪರ್ಮೊಕಾರ್ಬಾನಿಫೆರಸ್ ಯುಗದ ಹಿಮನದಿಗಳಿಂದ ಒಯ್ಯಲ್ಪಟ್ಟು ಒರಿಸ್ಸ, ಬಿಹಾರ್, ಮಧ್ಯಪ್ರದೇಶ, ರಾಜಸ್ತಾನ, ಹಿಮಾಚಲಶ್ರೇಣಿ ಇಲ್ಲೆಲ್ಲ ಹರಡಿ ಹಂಚಿಹೋಗಿರುವುದರಿಂದ ಆ ಯುಗದಲ್ಲಿ ಈ ಪ್ರಾಂತಗಳೆಲ್ಲ ಬೈಹದಾಕಾರದ ಹಿಮನದಿಗಳಿಂದ ಆವೃತವಾಗಿದ್ದುವೆಂದು ಊಹಿಸಬಹುದು. ಈ ಪ್ರದೇಶಗಳಲ್ಲಿ ಪೆಂಟೆಕಲ್ಲುಗಳು ಹರಡಿರುವ ರೀತಿಯಲ್ಲಿ ಏಕತೆ ಕಂಡುಬರುವುದಿಲ್ಲ.. ಹಲವು ಪ್ರದೇಶದ ಟಾಲ್‍ಚಿರ್ ಶಿಲಾಪ್ರಸ್ತರಗಳಲ್ಲಿ ಮೈಲುಗಟ್ಟಲೆ ಎಷ್ಟೇ ಹುಡುಕಿದರೂ ಗುಂಡುಕಲ್ಲುಗಳ ಸುಳಿವೇ ಇಲ್ಲ. ಮತ್ತೆ ಕೆಲವು ಕಡೆ ಅತಿಕಿರಿದಾದ ಪ್ರದೇಶಗಳಲ್ಲೂ ಅಸಂಖ್ಯಾತ ಗುಂಡುಕಲ್ಲುಗಳನ್ನು ಕಾಣಬಹುದು. ಇವು ಗ್ರಾನೈಟ್ (ಅಗ್ನಿಶಿಲೆ), ಷೇಲ್ ಅಥವಾ ಜೇಡುಶಿಲೆ (ಜಲಜಶಿಲೆ) ಮತ್ತು ಸ್ಲೇಟ್ ಕ್ವಾಟ್ರ್ಸೈಟ್ ನೈಸ್, ಹಾರ್ನ್‍ಬ್ಲೆಂಡ್, ಷಿಸ್ಟ್ (ರೂಪಾಂತರಿತ ಶಿಲೆಗಳು)-ಹೀಗೆ ನಾನಾ ಬಗೆಯ ಶಿಲೆಗಳಿಂದ ಬಂದವು. ಇವುಗಳಲ್ಲಿ ಹಲವು ಗುಂಡುಕಲ್ಲುಗಳು ಹತ್ತಿರದ ಪ್ರದೇಶಗಳಲ್ಲೇ ದೊರೆಯುವ ಶಿಲೆಗಳಿಂದ ಅವು ಹಿಮನದಿಯ ಕಾರ್ಯಾಚರಣೆಗೆ ಒಳಗಾದಾಗ ಬೇರ್ಪಟ್ಟವೆಂದು ಊಹಿಸಬಹುದು. ಆದರೆ ಕೆಲವು ಗುಂಡುಕಲ್ಲುಗಳಿಗೆ ಮೂಲವಾದ ಶಿಲೆಗಳನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುತಿಸಲು ಸಾಧ್ಯವಾಗಿಲ್ಲ. ಬಹುಶಃ ಅವು ಮತ್ತಾವುದೋ ದೂರದ ಪ್ರದೇಶದಿಂದ ಬಂದವೆಂದು ಊಹಿಸಬಹುದು. ಉದಾಹರಣೆಗೆ ಬಿಹಾರಿನ ಝರಿಯಾ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಕಾಣಬರುವ ಕ್ವಾಟ್ರ್ಸೈಟ್ ಶಿಲಾಗುಂಡುಗಳು ಮಧ್ಯಪ್ರದೇಶದ ಮಿರ್ಜಾಪುರದ ಬಳಿ ಇರುವ ವಿಂಧ್ಯಶಿಲಾ ಸ್ತೋಮಕ್ಕೆ ಸೇರಿದ ಕ್ವಾಟ್ರ್ಸೈಟ್ ಪ್ರಸ್ತರಗಳಿಂದ ಬಂದವೆಂದು ಭಾವಿಸಲಾಗಿದೆ. ಹಿಮನದಿಯೊಂದು ಈ ಶಿಲಾಪ್ರಸ್ತರಗಳಿಂದ ಗುಂಡುಶಿಲೆಯನ್ನು ಒಯ್ದು ಝರಿಯಾ ಬಳಿ ಶೇಖರಿಸಿದ ಹಾಗೆ ಕಾಣಿಸುತ್ತದೆ. ಹೀಗೆಯೇ ರಾಣಿಗಂಜ್ ಗಣಿಗಳ ಬಳಿ ಕಂಡುಬರುವ ಹಸಿರುಶಿಲೆ, ಜೇಡುಶಿಲೆ ಇವುಗಳ ಗುಂಡುಗಳು ಯಾವುದೋ ದೂರದ ಪ್ರಾಂತದಿಂದ ಬಂದವೆಂದು ತಿಳಿಯಲಾಗಿದೆ. ಈ ಗುಂಡುಗಳ ಮತ್ತೊಂದು ವಿಶೇಷವೆಂದರೆ, ಇವುಗಳ ನುಣುಪಾದ ಹೊರಮೈ ಮೇಲೆ ಅಸಂಖ್ಯಾತ ಸೂಕ್ಷ್ಮವಾದ ಸಮಾಂತರ ಗೀರು ರಚನೆಯನ್ನು ಸ್ಪಷ್ಟವಾಗಿ ಕಾಣಬಹುದು. ಇದು ಹಿಮನದಿಯ ಕಾರ್ಯಾಚರಣೆಗೆ ಸಾಕ್ಷೀಭೂತವಾಗಿದೆ. ದಕ್ಷಿಣರೀವಾದ ಸಿಂಗ್ರೂಲಿ ಕಲ್ಲಿದ್ದಲು ಗಣಿಗಳ ಬಳಿ ಈ ತೆರನಾದ ಅತ್ಯುತ್ತಮ ಗುಂಡು ಕಲ್ಲುಗಳನ್ನು ಕಾಣಬಹುದು. ಗುಂಡುಶಿಲಾಸ್ತರ ಸಾಮಾನ್ಯವಾಗಿ ನೂರು ಅಡಿಗಳಿಗೂ ಹೆಚ್ಚು ಮಂದವಿರುವುದಿಲ್ಲ. ಅನೇಕ ಕಡೆ ಸುಮಾರು 40`-50`ಗಳಷ್ಟು ಮಂದವಿದ್ದರೆ ಹೆಚ್ಚು. ಇವುಗಳ ನೆರವಿನಿಂದ ಹಿಮನದಿ ಹರಿದ ದಿಕ್ಕನ್ನು ನಿರ್ಧರಿಸಲು ಸಾಧ್ಯವಾಗಿದೆ. ದಾಮೋದರ್ ಕಣಿವೆಯ ಹಲವಾರು ಕಡೆ ಹಿಮನದಿಗಳಿಂದ ಶೇಖರವಾಗಿದ್ದ ಗುಂಡುಶಿಲೆಗಳು ಪುನಃ ನದಿಯ ಕಾರ್ಯಾಚರಣೆಗೆ ಒಳಗಾದ ಕುರುಹುಗಳನ್ನು ನೋಡಬಹುದು. ಈ ಶಿಲಾಶ್ರೇಣಿಯಲ್ಲಿ ಹಲಕೆಲವು ಪ್ರಾಚೀನ ಫಾಸಿಲುಗಳನ್ನು ಕಾಣಬಹುದು. ಇವುಗಳ ಪೈಕಿ ಮುಖ್ಯವಾದವು ನ್ಯೂರಾಪ್ಟೆರಸ್ ವರ್ಗದ ಕೀಟದ ರೆಕ್ಕೆ, ನೆಲ ಕೊರೆಯುವ ಹುಳಗಳ ಜಾಡು, ಪ್ರಾಣಿಯೊಂದರ ಮೂರು ಬೆರಳಿನ ಪಾದದ ಹೆಜ್ಜೆಯ ಅಸ್ಪಷ್ಟ ಗುರುತು ಮತ್ತು ಗಂಗಮಾಪ್ಟೆರಸ್, ಗ್ಲಾಸಾಪ್ಟೆರಿಸ್ ಮೊದಲಾದ ವೈಕ್ಷಗಳ ಎಲೆ ಮತ್ತು ಇತರ ಉಳಿಕೆಗಳು. 

ಟಾಲ್‍ಚಿರ್ ಗುಂಡುಶಿಲಾಸ್ತರಗಳ ವಯೋನಿರ್ಧಾರದಲ್ಲಿ ಭೂವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಹಲವರು ಇವನ್ನು ಕೆಳ ಪರ್ಮಿಯನ್ ಎಂದೂ ಮತ್ತೆ ಕೆಲವರು ಮಧ್ಯಪರ್ಮಿಯನ್ ಎಂದೂ ಇನ್ನೂ ಹಲವರು ಮೇಲಿನ ಕಾರ್ಬಾನಿಫೆರಸ್ ಯುಗದವೆಂದೂ ಅಭಿಪ್ರಾಯಪಟ್ಟಿದ್ದಾರೆ.
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ